ಸಯನೈಟ್
	ತರಿತರಿ ಮೇಲ್ಮೈಯ ತೆಳು ಬಣ್ಣದ ಅಂತಸ್ಸರಿತ ಅಗ್ನಿಶಿಲೆಗಳ (ಇಂಟ್ರೂಸಿವ್ ಇಗ್ನಿಯಸ್ ರಾಕ್ಸ್) ಒಂದು ವರ್ಗ. ಗ್ರಾನೈಟನ್ನು ಬಹುತೇಕ ಹೋಲುತ್ತದಾದರೂ ಇದರಲ್ಲಿ ಬೆಣಚು (ಕ್ವಾಟ್ರ್ಸ್) ಇಲ್ಲ. ಎಂದೇ, ಕ್ವಾಟ್ರ್ಸ್‍ರಹಿತ ಗ್ರಾನೈಟ್ ಎಂಬ ಹೆಸರೂ ಉಂಟು. 

	ಪ್ರಧಾನ ಘಟಕಗಳು: ಆರ್ತೊಕ್ಲೇಸ್, ಪರ್ತೈಟ್, ಆಲ್ಬೈಟ್, ಮೈಕ್ರೊಕ್ಲೈನ್ ಮುಂತಾದ ಯಾವುದಾದರೊಂದು ಕ್ಷಾರೀಯ ಫೆಲ್ಡ್‍ಸ್ಪಾರ್ ಮತ್ತು ಬಯೊಟೈಟ್, ಹಾರ್ನ್‍ಬ್ಲೆಂಡ್, ಪೈರಾಕ್ಸೀನ್ ಮುಂತಾದ ಯಾವುದಾದ ರೊಂದು ಫೆರೊಮ್ಯಾಗ್ನೇಸಿಯನ್ ಖನಿಜ. ಲ್ಯೂಸೈಟ್, ಸೋಡಲೈಟ್, ನೆಫಿಲೀನ್, ಕ್ಯಾಂಕ್ರೈನೈಟ್ ಮುಂತಾದ ಯಾವುದಾದ ರೊಂದು ಫೆಲ್ಡ್‍ಸ್ಪತಾಯ್ಡ್ ಖನಿಜವಿರುವ ಕ್ಷಾರೀಯ ಸೈಯೆನೈಟ್‍ಗಳ ವಿಶೇಷ ವರ್ಗವೂ ಉಂಟು. ಇರುವ ವಿಶಿಷ್ಟ ಘಟಕವನ್ನಾಧರಿಸಿ ಹೆಸರಿಸುವ ಪದ್ಧತಿಯೂ ಉಂಟು (ಉದಾ: ನೆಫಿಲೀನ್ ಸೈಯೆನೈಟ್, ಮೈಕಾ ಸೈಯೆನೈಟ್, ಲ್ಯೂಸೈಟ್ ಸೈಯೆನೈಟ್). ಘಟಕ ಖನಿಜಗಳು ನೀಡುವ ವಿಶಿಷ್ಟ ಬಣ್ಣವನ್ನಾ ಧರಿಸಿ ಹೆಸರಿಸುವದೂ ಉಂಟು (ಉದಾ: ಕಪ್ಪು ಗ್ರಾನೈಟ್, ನೀಲಿ ಗ್ರಾನೈಟ್).

	ಗೋಮೇಧಿಕ (ಝಿರ್ಕಾನ್), ಝಿರ್ಕೋನಿಯಮ್, ಟಯಟ್ಯಾನಿ ಯಮ್, ಸೀರಿಯಮ್-ಯಿಟ್ರಿಯಮ್ ಗುಂಪಿನ ಲೋಹಖನಿಜಗಳು ಕ್ಷಾರ ಸೈಯೆನೈಟುಗಳಲ್ಲಿ ಅಧಿಕ ಪ್ರಮಾಣದಲ್ಲಿ ಲಭ್ಯ. ಆದುದರಿಂದ ಈ ಸೈಯೆನೈಟುಗಳಿಗೆ ಅಧಿಕ ವಾಣಿಜ್ಯ ಮೌಲ್ಯವಿದೆ.

	ಪ್ರಾಚೀನ ಈಜಿಪ್ಟಿನ ಸೈಯೆನೆ ಆನ್ ದಿ ನೈಲ್ ಎಂಬಲ್ಲಿ ಈ ಶಿಲೆಯ ಗಣಿಗಾರಿಕೆ ಇತ್ತು. ಎಂದೇ ಈ ಹೆಸರು. ಸ್ವಿಟ್ಜರ್‍ಲ್ಯಾಂಡ್, ಜರ್ಮನಿ, ನಾರ್ವೆ, ಯುನೈಟೆಡ್ ಸ್ಟೇಟ್ಸ್ ದೇಶಗಳಲ್ಲಿ ಸೈಯೆನೈಟ್ ನಿಕ್ಷೇಪಗಳಿವೆ. ಭಾರತದ ರಾಜಸ್ಥಾನ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಲಭ್ಯ.							
	(ಎಸ್.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ